ಮೂಲಭೂತ ಹಕ್ಕುಗಳು - 
	ಮಾನವ ತನ್ನ ವ್ಯಕ್ತಿತ್ವದ ಪೂರ್ಣ ವಿಕಾಸದ ಮತ್ತು ಸಂತೋಷಪೂರ್ಣ ತೃಪ್ತಿಕರ ಬಾಳ್ವೆಗೆ ಕೆಲವು ಹಕ್ಕುಗಳನ್ನು ಕಾಯ್ದಿರಿಸಿಕೊಂಡ. ಕಾರ್ಯಾಂಗ ಮತ್ತು ಶಾಸಕಾಂಗಗಳು ಆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸದಂತೆ ಸಂವಿಧಾನ ರೂಪಿಸಿಕೊಂಡ. ಆ ಮಾರ್ಗದಲ್ಲಿ 1789ರಲ್ಲಿ ಫ್ರಾನ್ಸಿನ ರಾಷ್ಟ್ರೀಯ ಅಸೆಂಬ್ಲಿ ಮಾನವ ಹಕ್ಕುಗಳನ್ನು ಸ್ವೀಕರಿಸಿತು. ಅಮೆರಿಕದ ಸಂವಿಧಾನಕರ್ತರ ಮೇಲೆ ಇದು ಪ್ರಭಾವಬೀರಿತು. ಅವರು 1798ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನ ಸಂವಿಧಾನದ. ಮೊದಲ ಹತ್ತು ತಿದ್ದುಪಡಿಗಳಲ್ಲಿ ಹಕ್ಕುಗಳ ವಿಧೇಯಕವನ್ನು ಸೇರ್ಪಡೆ ಮಾಡಿದರು. ಐರ್ಲೆಂಡ್, ಜಪಾನ್ ಹಾಗೂ ಸ್ವಿಟ್ಜರ್‍ಲೆಂಡ್ ಇದನ್ನು ಅನುಸರಿಸಿದುವು. ಮುಂದೆ ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಮೂಲಭೂತ ಹಕ್ಕುಗಳ ಮಸೂದೆ ಒಂದನೆಯ ಮಹಾಯುದ್ಧದ ಅನಂತರ ಸೇರ್ಪಡೆಯಾಯಿತು.

	ಇಂಗ್ಲೆಂಡಿನಲ್ಲಿ ವೈಯಕ್ತಿಕ ಹಕ್ಕುಗಳ ತಳಹದಿ ಸ್ವರೂಪ ನಿಷೇದಾರ್ಥಕವಾದುದು. ಅಂದರೆ ಎಲ್ಲಿಯವರೆಗೆ ದೇಶದ ಸಾಮಾನ್ಯ ನಿಯಮಗಳನ್ನು ಪ್ರಜೆ ಉಲ್ಲಂಘಿಸುವುದಿಲ್ಲವೋ ಅಲ್ಲಿಯವರೆಗೆ ಅವನು ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ಹೊಂದಿರುತ್ತಾನೆ. ಕೆಲವೊಂದು ನಿರ್ದಿಷ್ಟ ಪ್ರಸಂಗಗಳಲ್ಲಿ ವ್ಯಕ್ತಿಯ ಹಕ್ಕುಗಳು ನ್ಯಾಯಾಂಗದ ತೀರ್ಮಾನಕ್ಕೆ ಬದ್ಧವಾಗಿದ್ದು ಸಂರಕ್ಷಿಸಲಾಗುತ್ತದೆ. ಇಂಗ್ಲೆಂಡಿನ ಸಂವಿಧಾನ ಅಲಿಖಿತವಾದುದು. ಆದ್ದರಿಂದ ಅಮೆರಿಕ ಸಂಯುಕ್ತಸಂಸ್ಥಾನ ಅಥವಾ ಇನ್ನಿತರ ಲಿಖಿತ ಸಂವಿಧಾನದಂತೆ ಇಲ್ಲಿ ಮೂಲಭೂತ ಹಕ್ಕುಗಳ ನಿಬಂಧನೆಗಳಿರುವುದಿಲ್ಲ. ಅಂದಮಾತ್ರಕ್ಕೆ ಇಂಗ್ಲೆಂಡಿನಲ್ಲಿ ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಮಾನ್ಯತೆ ಇಲ್ಲ ಎಂಬರ್ಥವಲ್ಲ ಏಕೆಂದರೆ ವ್ಯಕ್ತಿಯ ಮೂಲಭೂತಹಕ್ಕುಗಳ ನಿರಾಕರಣೆಯಿಂದ ಪ್ರಜಾಪ್ರಭುತ್ವಕ್ಕೆ ಬೆಲೆಯಿರುವುದಿಲ್ಲ. ಕೆನಡ, ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕ ಸಹ ಗ್ರೇಟ್ ಬ್ರಿಟನ್ನಿನ ಮಾರ್ಗವನ್ನೇ ಅನುಸರಿಸಿವೆ. ಗ್ರೇಟ್‍ಬ್ರಿಟನ್ನಿನಂತೆ ಅಲ್ಲಿಯೂ ಮೂಲಭೂತ ಹಕ್ಕುಗಳ ನಿಬಂಧನ ಸೇರ್ಪಡೆಗೊಂಡಿಲ್ಲ. ಆದರೆ 1960ರಲ್ಲಿ ಕೆನಡದ ಸಂಸತ್ತು ಹಕ್ಕುಗಳ ವಿಧೇಯಕವನ್ನು ಅನುಮೋದಿಸಿತು. ವಿಶ್ವಸಂಸ್ಥೆ ಸಹ ಮಾನವ ಹಕ್ಕುಗಳ ಮಸೂದೆಯನ್ನು ಅಂಗೀಕರಿಸಿದೆ.

	ಇಂಗ್ಲೆಂಡಿನಲ್ಲಿ ನ್ಯಾಯಾಲಯಗಳು ಕಾರ್ಯಾಂಗದ ವಿರುದ್ಧ ವ್ಯಕ್ತಿಯನ್ನು ಸಂರಕ್ಷಿಸುವ ಪೂರ್ಣಾಧಿಕಾರ ಹೊಂದಿವೆ. ಆದರೆ ವ್ಯಕ್ತಿಯ ಹಕ್ಕುಗಳ ವಿರುದ್ಧ ಸಂಘರ್ಷಿಸುವ ಶಾಸನಗಳ ಬಗ್ಗೆ ನ್ಯಾಯಾಲಯಗಳು ಅಧಿಕಾರರಹಿತವಾಗಿವೆ. ಕಾರಣ ಇಂಗ್ಲೆಂಡಿನ ಶಾಸನ ಸಭೆಗೆ ಯಾವುದೇ ಮೂಲಭೂತಹಕ್ಕುಗಳ ಬದ್ಧತೆಯಿಲ್ಲದಿರುವುದು.

	ಅಮೆರಿಕದ ಸಂವಿಧಾನ ಶಿಲ್ಪಿಗಳು ವ್ಯಕ್ತಿಯ ಮೂಲಭೂತ ಹಕ್ಕುಗಳ ವಿರುದ್ಧ ದಬ್ಬಾಳಿಕೆಗೆ ಕಾರ್ಯಾಂಗ ಮತ್ತು ಶಾಸಕಾಂಗಕ್ಕೂ ನಿಯಮಾನುಸಾರ ತಡೆಹಾಕಿದ್ದಾರೆ. ಆದ್ದರಿಂದ ಅಮೆರಿಕದ ಮಾನವ ಹಕ್ಕುಗಳ ವಿಧೇಯಕ ಕಾರ್ಯಾಂಗ ಹಾಗೂ ಶಾಸಕಾಂಗಗಳೆರಡಕ್ಕೂ ಅನ್ವಯಗೊಂಡಿದ್ದು ಎರಡನ್ನೂ ಸಮಾನವಾಗಿ ಒಳಪಡಿಸುವಂಥದು. ಹೀಗಾಗಿ ಇದರ ಫಲಿತಾಂಶವೇನೆಂದರೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನ್ಯಾಯಾಂಗದ ಪರಮಾಧಿಕಾರ ವ್ಯವಸ್ಥೆರೂಪುಗೊಂಡಿದೆ. ಆದರೆ ಅದೇ ಇಂಗ್ಲೆಂಡಿನಲ್ಲಿ ಪಾರ್ಲಿಮಿಂಟರಿ ವ್ಯವಸ್ಥೆಯ ಪರಮಾಧಿಕಾರ ನೆಲೆಗೊಂಡಿದೆ.

	1935ರ ಭಾರತ ಸರ್ಕಾರದ ಕಾಯಿದೆಯಲ್ಲಿ ಮೂಲಭೂತ ಹಕ್ಕುಗಳ ಘೋಷಣೆ ಹಾಗೂ ಅದನ್ನು ಜಾರಿಗೊಳಿಸುವ ವಿಚಾರದಲ್ಲಿ ಸೈಮನ್ ವಿಚಾರಣಾ ಆಯೋಗ ಹಾಗೂ ಜಂಟಿ ಪಾರ್ಲಿಮೆಂಟರಿ ಸಮಿತಿಗಳು ವಿರುದ್ಧವಾಗಿದ್ದವು. ನೆಹರೂ ವರದಿಯನ್ನು ಒಳಗೊಂಡಂತೆ ರಾಷ್ಟ್ರೀಯರ ಅಭಿಪ್ರಾಯ ಮಾತ್ರ ಮೂಲಭೂತ ಹಕ್ಕುಗಳ ವಿಧೇಯಕದ ಪರವಾಗಿದ್ದವು.

	ಭಾರತ ಸಂವಿಧಾನ ಶಿಲ್ಪಿಗಳು ವ್ಯಕ್ತಿ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಮೂಲಭೂತ ಹಕ್ಕುಗಳನ್ನು ರೂಪಿಸಿದ್ದಾರೆ. ಹಕ್ಕುಗಳ ಭರವಸೆ, ಮಾರ್ಗದರ್ಶಕ ಮೂಲತತ್ತ್ವಗಳು, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ಹಕ್ಕುಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಭಾರತ ಸಂವಿಧಾನದ ಮೂರನೆಯ ಭಾಗ ಅಸಂಖ್ಯಾತ ಮೂಲಭೂತ ಹಕ್ಕುಗಳನ್ನು ಒಂದುಗೂಡಿಸಿದೆ. ಇವುಗಳ ಕಾರ್ಯಾಂಗ ಮಾತ್ರವಲ್ಲದೆ ಶಾಸಕಾಂಗಗಳ ಅಧಿಕಾರಾಂಗಗಳ ಅಧಿಕಾರಿಗಳಿಗೆ ಸಹ ಮಿತಿಯನ್ನು ರೂಪಿಸುತ್ತವೆ.

	ಭಾರತ ಸಂವಿಧಾನ ಇಂಗ್ಲೆಂಡಿನಲ್ಲಿ ಅಸ್ತಿತ್ವದಲ್ಲಿರುವ ಶಾಸಕಾಂಗದ ಪ್ರಭುತ್ವ, ಅಮೆರಿಕದಲ್ಲಿ ಅಸ್ತಿತ್ವದಲ್ಲಿರುವ ನ್ಯಾಯಾಂಗದ ಪರಮಾಧಿಕಾರಗಳ ನಡುವಣ ಸಮನ್ವಯ ಸ್ವರೂಪದ್ದಾಗಿದೆ. ಭಾರತದ ಸಂಸತ್ತು, ಸಂವಿಧಾನದ ನಿಯಮಾವಳಿಗಳ ಪರಿಮಿತಿಯಲ್ಲೇ, ಸಂವಿಧಾನ ಸೂಚಿಸುವ ನಿಷಿದ್ಧಗಳನ್ನು ಗಮನಿಸಿಯೇ ಕಾರ್ಯತತ್ಪುರವಾಗಬೇಕು. ಪರಿಮಿತಿಗಳ ನಿಯಮೋಲ್ಲಂಘನೆ ಆದ ಪಕ್ಷದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳು ಅಂಥ ಕಾನೂನುಗಳನ್ನು ಸಂವಿಧಾನ ವಿರುದ್ಧವೆಂದು ಘೋಷಿಸಿ, ನಿಷೇಧಿಸುವ ಅಧಿಕಾರ ಹೊಂದಿವೆ.

	ಭಾರತದ ಸಂವಿಧಾನ, ರಾಷ್ಟ್ರ ಪ್ರಜೆಗಳಿಗಾಗಿ ಅಸ್ತಿತ್ವದಲ್ಲಿದೆ. ಅವರ ಕ್ಷೇಮಾಭ್ಯುವಯ ಹಾಗೂ ಅವರ ವ್ಯಕ್ತಿತ್ವದ ಪೂರ್ಣ ವಿರಸನಕ್ಕಾಗಿ ಎಂಬುದರ ಬಗ್ಗೆ ಒತ್ತು ನೀಡುತ್ತದೆ. ಇಲ್ಲಿಯ ಕೆಲವೊಂದು ಹಕ್ಕುಗಳನ್ನು ಎಲ್ಲರಿಗೂ ನೀಡಲಾಗಿದೆ. ಉಳಿದ ಹಕ್ಕುಗಳನ್ನು ಇಲ್ಲಿನ ಪ್ರಜೆಗಳಿಗೆ ಮಾತ್ರವೇ ನೀಡಲಾಗುತ್ತದೆ. ಅಂದರೆ ಭಾರತೀಯರಿಗೂ ವಿದೇಶಿಯರಿಗೂ ಸಂವಿಧಾನದಲ್ಲಿ ಆಂತರ್ಯ ಗುರುತಿಸಲಾಗಿದೆ.

	ಸಂವಿಧಾನದಲ್ಲಿ ಕೇವಲ ಮೂಲಭೂತ ಹಕ್ಕುಗಳ ಸೇರ್ಪಡೆಯಷ್ಟರಿಂದಲೇ ಉಪಯೋಗವಿಲ್ಲ. ಮೂಲಭೂತ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅದು ಅರ್ಥಪೂರ್ಣವಾಗುತ್ತದೆ. ಭಾರತದ ಸಂವಿಧಾನ ಅಂಥ ಮಾರ್ಗೋಪಾಯಗಳನ್ನು ಕಲ್ಪಸಿದೆ.

	ಭಾರತದ ಮೂಲಭೂತ ಹಕ್ಕುಗಳನ್ನು (12-35) ಹಲವಾರು ವರ್ಗಗಳಲ್ಲಿ ವರ್ಗೀಕರಿಸಲಾಗಿದೆ. ಉದಾಹರಣೆಗಾಗಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧರ್ಮಪರಿಪಾಲನೆಯ ಹಕ್ಕು, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಕ್ಕುಗಳು.

	ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈಬಿಡಲಾಗಿದೆ. 19 (1) ಎಫ್ ಹಾಗೂ 31ನೆಯ ಕಟ್ಟಳೆಯನ್ವಯ 44ನೆಯ ಸಂವಿಧಾನ ತಿದ್ದುಪಡಿ ವಿಧೇಯಕ. 1978 ಈ ಸಂಬಂಧ ಸಂವಿಧಾನ ಪರಿಹಾರ ಹಕ್ಕುಗಳನ್ನೂ ಕೈಬಿಡಲಾಗಿದೆ. ಆದರೆ ಹಕ್ಕುಗಳ ಜಾರಿಗಾಗಿ, ಯೋಗ್ಯ ಕ್ರಮಕ್ಕಾಗಿ ಸರ್ವೋಚ್ಛ ನ್ಯಾಯಾಲಯದ ಮುಂದೆ ಅಹವಾಲು ತರುವ ಹಕ್ಕನ್ನು ಕಾಯ್ದುಕೊಳ್ಳಲಾಗಿದೆ.

	ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತ್ಯೇಕವಾಗಿ ಉಲ್ಲೇಖಿಸದಿದ್ದರೂ ಅದನ್ನು 19 (1) (ಎ) ವಿಧಿಯನ್ವಯ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದೊಡನೆ ಸೇರ್ಪಡೆಗೊಳಿಸಲಾಗಿದೆ.

	1976ರ 42ನೆಯ ಸಂವಿಧಾನ ತಿದ್ದುಪಡಿಯ ವಿಧೇಯಕದ ಮೂಲಕ ಅದಕ್ಕೆ ಸರಿಗಟ್ಟುವಂತೆ ಮೂಲಭೂತ ಕರ್ತವ್ಯವನ್ನು (51ಎ ವಿಧಿಯಲ್ಲಿ ಉಲ್ಲೇಖಿಸಿರುವಂತೆ) ಆಚರಣೆಗೆ ತರಲಾಗಿದೆ. ಮೂಲಭೂತ ಕರ್ತವ್ಯಗಳನ್ನು ತನಗೆ ತಾನೆ ನ್ಯಾಯಾಲಯಗಳಿಂದ ಆಚರಿಸಬೇಕೆಂದು ನಿರ್ಬಂಧಿಸಲಾಗುವುದಿಲ್ಲ. ಅಂತೆಯೇ ಮೂಲಭೂತ ಕರ್ತವ್ಯಗಳ ಉಲ್ಲಂಘನೆಯನ್ನು ತನಗೆ ತಾನೆ ಶಿಕ್ಷೆಗೆ ಗುರಿಪಡಿಸಲಾಗುವುದಿಲ್ಲ. ನ್ಯಾಯಾಲಯದ ಮುಂದೆ ಮೂಲಭೂತ ಹಕ್ಕುಗಳ ಜಾರಿಯ ವಿಚಾರ ಬಂದಾಗ. ಸಂವಿಧಾನದ ಎಲ್ಲ ಭಾಗಗಳನ್ನು ಪರಿಶೀಲಿಸತಕ್ಕುದಾಗಿದೆ. ನ್ಯಾಯಾಲಯ 51ಎ ವಿಧಿಯನ್ವಯ ಕರ್ತವ್ಯದ ಉಲ್ಲಂಘನೆ ಮಾಡಿರುವ ವ್ಯಕ್ತಿಯ ಮೂಲಭೂತ ಹಕ್ಕನ್ನು ಜಾರಿಗೊಳಿಸಲು ತಿರಸ್ಕರಿಸಬಹುದು. ಇದರಿಂದ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಒತ್ತು ನೀಡಿರುವ ಮೂಲಸಂವಿಧಾನದ ಹಕ್ಕುಗಳನ್ನು ಮಿತಿಗೊಳಪಡಿಸಲಾಗಿದೆ.

	ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ 368ನೆಯ ವಿಧಿಯನ್ವಯ ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವನ್ನು (ಶಂಕರಿಪ್ರಸಾದ್ ಹಾಗೂ ಸಜ್ಜನ್‍ಸಿಂಗ್) ಎರಡು ಪ್ರತ್ಯೇಕ ಮೊಕದ್ದಮೆಗಳಲ್ಲಿ ಪ್ರಶ್ನಿಸಲಾಯಿತು. ಈ ಎರಡೂ ಮೊಕದ್ದಮೆಗಳಲ್ಲಿ ಸಂಸತ್ತಿಗೆ ಈ ಬಗೆಯ ಅಧಿಕಾರವಿರುವುದಾಗಿ ಸರ್ವೋಚ್ಚನ್ಯಾಯಾಲಯ ತೀರ್ಪಿತ್ತಿತು. ಅನಂತರ ಮತ್ತೆ ಸಂವಿಧಾನ ತಿದ್ದುಪಡಿಯ ಸಮಂಜಸತೆಯನ್ನು ಗೋಲಕನಾಥ್ ಮೊಕದ್ದಮೆಯಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯ ಮೇಲಿನ ಎರಡು ತೀರ್ಪುಗಳನ್ನು ರದ್ದುಪಡಿಸಿ ಸಂಸತ್ತಿಗೆ ಮೂಲಭೂತ ಹಕ್ಕುಗಳನ್ನು ತಿದ್ದು ಪಡಿಮಾಡುವ ಯಾವುದೇ ಅಧಿಕಾರವಿಲ್ಲವೆಂದು ತೀರ್ಪಿತ್ತಿತು. ಆದರೆ ಅನಂತರದ ಶಂಕರಾನಂದಭಾರತಿ ಮೊಕದ್ದಮೆಯಲ್ಲಿ ಸರ್ವೋಚ್ಚನ್ಯಾಯಾಲಯ ಗೋಲಕನಾಥ್ ಮೊಕದ್ದಮೆಯ ತೀರ್ಪನ್ನು ರದ್ದುಪಡಿಸಿ, ಮೂಲಭೂತ ಹಕ್ಕುಗಳನ್ನು ಒಂದು ಪರಿಮಿತಿಗೊಳಪಡಿಸಿ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇರುವುದಾಗಿ ತೀರ್ಪಿತ್ತಿದೆ. ಅದರಂತೆ ಯಾವುದೇ ಸಂದರ್ಭದಲ್ಲಿಯಾಗಲೀ ಸಂವಿಧಾನದ ಮೂಲ ರೂಪುರೇಷೆಗಳನ್ನು ನಾಶಪಡಿಸಕೂಡದು. ಉದಾಹರಣೆಗೆ ಸರ್ಕಾರದ ಗಣರಾಜ್ಯ ಸ್ವರೂಪ, ನ್ಯಾಯಾಂಗ ಪುನರ್ವಿಮರ್ಶೆ ಇತ್ಯಾದಿ. ಇದರಿಂದಾಗಿ ಸಂಸತ್ತಿನ ತಿದ್ದುಪಡಿಯ ಅಧಿಕಾರ ವ್ಯಾಪ್ತಿ ಪರಿಮಿತಿಗೊಳಪಟ್ಟಂತಾಯಿತು. ಮಿನರ್ವ ಮಿಲ್ಸ್ ಮೊಕದ್ದಮೆಯಲ್ಲಿ ಸರ್ವೋಚ್ಚನ್ಯಾಯಾಲಯ ಶಂಕರಾನಂದಭಾರತಿ ಮೊಕದ್ದಮೆಯಲ್ಲಿ ನೀಡಿದ ತೀರ್ಪಿನಂತೆಯೇ, ಕೆಲವೊಂದು ತಿದ್ದುಪಡಿಗಳನ್ನು ಸಂವಿಧಾನ ಬದ್ಧವಲ್ಲವೆಂದು ಹೊಡೆದು ಹಾಕಿತು. ಅವುಗಳು ಸಂವಿಧಾನದ ಮೂಲಚೌಕಟ್ಟಿಗೆ, ತಿರುಳಿಗೆ ಉಲ್ಲಂಘನೆಯಾಗುತ್ತಿದ್ದಿತೆಂಬುದೇ ಅದಕ್ಕೆ ಕಾರಣ.

	ಮೂಲಭೂತ ಹಕ್ಕುಗಳನ್ನು ಕಾಯ್ದುಕೊಂಡಿರುವ ಭಾರತದ ಲಿಖಿತ ಸಂವಿಧಾನ ಪ್ರಪಂಚದ ಇತರ ರಾಷ್ಟ್ರಗಳಿಗೂ ಆದರ್ಶಪ್ರಾಯವಾಗಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. (ನೋಡಿ- ಭಾರತೀಯ-ಸಂವಿಧಾನ)
        										      (ಆರ್.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ